ಚಿತ್ರಲೇಖಗಳು
ದತ್ತಾಂಶವನ್ನು ಪ್ರದರ್ಶಿಸಲು ಬಳಸುವ ಪ್ರತೀಕಗಳು (ಪಿಕ್ಟೋಗ್ರಾಫ್). ಇವು ದತ್ತಾಂಶಗಳ ಸ್ವರುಪವನ್ನು ಸೂಚಿಸುವಂತಿರುತ್ತವೆ. ಉದಾಹರಣೆಗೆ ವಿದೇಶಿ ಪ್ರವಾಸಿಗಳ ವಾರ್ಷಿಕ ಸಂಖ್ಯೆಗಳನ್ನು ಹೋಲಿಸಲು ಕ್ಯಾಮರವನ್ನು ಬಗಲಲ್ಲಿ ತೂಗುಹಾಕಿಕೊಂಡಿರುವ ಮನುಷ್ಯಾಕೃತಿಗಳು. ದೇಶದ ನೌಕಾಬಲದ ಬೆಳವಣಿಗೆಯನ್ನು ತೋರಿಸಲು ಯುಧ್ದನೌಕೆಗಳ ಆಕೃತಿಗಳು. ರಾಷ್ಟ್ರಗಳ ಅಕ್ಕಿಯ ಉತ್ಪಾದನೆಯನ್ನು ಹೋಲಿಸಲು ಅಕ್ಕಿಮೂಟೆಗಳ ಆಕೃತಿಗಳು ಇತ್ಯಾದಿ. ಕೋಷ್ಟಕ 1 ಮತ್ತು ಕೋಷ್ಟಕ 2ರಲ್ಲಿರುವ ದತ್ತಾಂಶಗಳಿಗೆ ಅನುರೂಪವಾದ ಚಿತ್ರಲೇಖಗಳನ್ನು ಚಿತ್ರದಲ್ಲಿ ತೋರಿಸುತ್ತವೆ.

ಚಿತ್ರ-1

ಕೋಷ್ಟಕ 1 : ಕರ್ನಾಟಕದಲ್ಲಿ ಕೃಷಿ ಉಪಕರಣಗಳ ಅಂದಾಜು ಸಂಖ್ಯೆಗಳು.
ವರ್ಷ
ಎಣ್ಣೆ ಎಂಜಿನ್ನುಗಳು
ವಿದ್ಯುತ್‍ಪಂಪ್ ಸೆಟ್ಟುಗಳು
ಟ್ರ್ಯಾಕ್ಟರುಗಳು

1956
1961
5628
10,087
5481
12,433
807
982

ಒಂದು ಮನುಷ್ಯಾಕೃತಿ 50 ದಶಲಕ್ಷ ಜನರನ್ನು ಸೂಚಿಸುತ್ತಿದ್ದರೆ, ಆಗ 250 ದಶಲಕ್ಷ ಜನರನ್ನು ಸೂಚಿಸಲು 5 ಮನುಷ್ಯಾಕೃತಿಗಳನ್ನು ಬಳಸಿಕೊಂಡರಾಯಿತು. 50 ದಶಲಕ್ಷಕ್ಕಿಂತ ಕಡಿಮೆ ಜನರನ್ನು ಸೂಚಿಸಬೇಕಾದ್ದಲ್ಲಿ ಪ್ರತೀಕದ ಒಂದು ಸೂಕ್ತ ಭಾಗವನ್ನು ತೋರಿಸಬಹುದು. ಹೀಗಾಗಿ, 275 ದಶಲಕ್ಷ ಜನರನ್ನು ತೋರಿಸಬೇಕಾದಲ್ಲಿ 5 ಪೂರ್ಣ ಮತ್ತು ಒಂದು 
ಕೋಷ್ಠಕ 2 : ಭಾರತದ ಜನಸಂಖ್ಯೆ
ಜನಗಣತಿ ವರ್ಷ
ಜನಸಂಖ್ಯೆ(ದಶಲಕ್ಷಗಳಲ್ಲಿ)

1941
318.7

1951
361.1

1961
439.2

1971
547.4

ಅರ್ಧ ಪ್ರತೀಕಗಳನ್ನು ಬಳಸಿಕೊಂಡರೆ ಸಾಕು. ಕೆಲವೊಮ್ಮೆ ಒಂದೇ ಪ್ರತೀಕ ಸಂದರ್ಭಾನುಸಾರವಾಗಿ ಬೇರೆಬೇರೆ ಅರ್ಥಗಳನ್ನು ಕೊಡಬಹುದು. ನಿದರ್ಶನಕ್ಕಾಗಿ, ಸೂರ್ಯನ ಗುರುತು ಹಗಲು ಅಥವಾ ಶುಭ್ರತೆಯನ್ನು ಸೂಚಿಸಬಹುದು. ಚಿತ್ರಲೇಖಗಳ ಮೂಲಕ ದತ್ತಾಂಶಗಳ ಸ್ಥೂಲವಿವರಗಳನ್ನು ಆಕರ್ಷಕ ಮತ್ತು ಸುಲಭಗ್ರಾಹ್ಯವಾಗುವಂತೆ ಪ್ರದರ್ಶಿಸಬಹುದು. ಇಲ್ಲಿ ಪರಿಮಾಣಗಳ ಏರಿಳಿತಗಳು ವೀಕ್ಷಕನ ಕಣ್ಣುಗಳಿಗೆ ಶೀಘ್ರವಾಗಿ ಗೋಚರಿಸುತ್ತವೆ. ಕೋಷ್ಠಕಗಳನ್ನು  ಉಪಯೋಗಿಸುವುದು ಇಲ್ಲವೇ ಬೇರೆ ಯಾವುದೇ ರೂಪದಲ್ಲಿ ಮಾಹಿತಿಯನ್ನು ಕೊಡುವುದಕ್ಕಿಂತ ಬೇಗನೆ ಚಿತ್ರಗಳ ಮೂಲಕ ಮಾಹಿತಿಯನ್ನು ಪ್ರದರ್ಶಿಸುವ ವಿಧಾನ ನೋಡುವವನ ಲಕ್ಷ್ಯವನ್ನು ಸೆರೆಹಿಡಿದು, ಅವನ ಮನಸ್ಸಿನ ಮೇಲೆ ದೀರ್ಘಕಾಲದವರೆಗೆ ಅಚ್ಚಳಿಯದ ಪ್ರಭಾವವನ್ನು ಬೀರುತಗತದೆ. ಸರ್ಕಾರಿ ವಿಭಾಗಗಳು ಮತ್ತು ಖಾಸಗಿ ಸಂಸ್ಥೆಗಳು ಪ್ರದರ್ಶನ, ಪ್ರಚಾರ, ಜಾಹಿರಾತು ಮತ್ತು ಜನರಿಗೆ, ಮಾಹಿತಿಯನ್ನು ಒದಗಿಸುವ ಉದ್ದೇಶಕ್ಕೆ ಚಿತ್ರಲೇಖಗಳನ್ನು ಬಳಸುತ್ತವೆ.

	ಚಿತ್ರಲೇಖಗಳು ಮೂಲತಃ ಭಾವ ಪ್ರಧಾನವಾದವು. ಇಲ್ಲಿ ಆರ್ಥ ನೇರವಾಗಿ ಚಿತ್ರದ ಮೂಲಕ ಕೊಡಲ್ಪಡುತ್ತದೆ.ಚಿತ್ರವನ್ನು ಅರಿಯಲು ಅದನ್ನು ಬರೆದವನ ಭಾಷೆಯ ಜ್ಞಾನ ಅವಶ್ಯವಲ್ಲ, ಆದರೆ ಸೂಕ್ಷ್ಮವಿವರಗಳನ್ನು ಇವುಗಳಲ್ಲಿ ನಿಖರವಾಗಿ ಪ್ರದರ್ಶಿಸುವುದು ಕಷ್ಟ. ಉದಾಹರಣೆಗೆ 250 ದಶಲಕ್ಷ ಮತ್ತು 250.23 ದಶಲಕ್ಷ ಜನಸಂಖ್ಯೆಗಳಿಗೆ ನಡುವಿನ ಭೇದವನ್ನು ಚಿತ್ರಲೇಖಗಳಲ್ಲಿ ತೋರಿಸುವುದು. ತೋರಿಸಿದರೂ ಅದನ್ನು ಸುಲಭದಲ್ಲಿ ಗ್ರಹಿಸುವುದು ಕಷ್ಟ. ಚಿತ್ರಲೇಖಗಳ ರಚನೆಗೆ ನಾಲ್ಕು ಸೂತ್ರವಿಧಿಗಳಿವೆ:

1. ಪರಿಮಾಣಗಳನ್ನು ಪ್ರತೀಕಗಳ ಸಂಖ್ಯೆಗಳ ಮೂಲಕ ಹೋಲಿಸಲಾಗುವುದು, ಪ್ರತೀಕಗಳ ಗಾತ್ರಗಳ ಮೂಲಕವಲ್ಲ. ಏಕೆಂದರೆ ಪ್ರತೀಕಗಳ ಗಾತ್ರಗಳು ಏರಿಳಿಯುತ್ತಿದ್ದರೆ, ಅದು ವೀಕ್ಷಕನ ಗಮನಕ್ಕೆ ಬಂದರೂ ಏರಿಳಿತದ ನಿಖರ ಪರಿಮಾಣವನ್ನು ತಿಳಿಯುವುದು ಕಷ್ಟ. ಪರಿಣಾಮವಾಗಿ ಬೇರೆಬೇರೆ ಪರಿಣಾಮಗಳನ್ನು ಅನುರೂಪ ಗಾತ್ರದ ಪ್ರತೀಕಗಳ ಸಹಾಯದಿಂದ ಹೋಲಿಸುವುದು ಅಪರೂಪ. ಒಂದೇ ಗಾತ್ರದ ಅವಶ್ಯವಿರುವಷ್ಟು ಪ್ರತೀಕಗಳನ್ನು (ಅಥವಾ ಪ್ರತೀಕದ ಭಾಗವನ್ನು) ರಚಿಸುವುದು ರೂಢಿ.

2. ಪ್ರತೀಕಗಳು ನಿಚ್ಚಳವಾಗಿದ್ದು ಸಂದಿಗ್ದತೆ ಇಲ್ಲವಾಗಿರಬೇಕು. ಅಲ್ಲದೆ ಅವು ಸ್ವಯಂ ಸ್ಪಷ್ಟವಾಗಿರಬೇಕು.

ಚಿತ್ರ-2

3. ಏಕಾಂಗಿ ಮಾಹಿತಿಯನ್ನು ತೋರಿಸಲು ಚಿತ್ರಲೇಖಗಳು ಸೂಕ್ತವಲ್ಲ. ಉದಾಹರಣೆಗೆ 1970ರಲ್ಲಿ ವಿದೇಶಿ ಪ್ರವಾಸಿಗಳ ಒಟ್ಟು ಸಂಖ್ಯೆಯನ್ನು ಮಾತ್ರ ಏಕಾಂಗಿಯಾಗಿ ಚಿತ್ರಲೇಖದ ಮೂಲಕ ಪ್ರದರ್ಶಿಸುವುದು ಸೂಕ್ತವಲ್ಲ. ಎಕೆಂದರೆ ಇಲ್ಲಿ ಹೋಲಿಕೆಯ ಮೂಲಕ ತಿಳಿವಳಿಕೆ ಮೂಡಲಾರದು. ಬದಲು ಐದು ನಿರ್ದಿಷ್ಟ ವರ್ಷಗಳಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗಳ ಸಂಖ್ಯೆಗಳ ತುಲನೆಯನ್ನು ಅನುರೂಪ ಚಿತ್ರಲೇಖಗಳ ಮೂಲಕ ಮಾಡಬಹುದು.

4. ತುಲನೆ ಮಾಡಬೇಕಾದ ಪರಿಮಾಣಗಳ ಸರಿಸುಮಾರು ಮೌಲ್ಯಗಳನ್ನು ಮಾತ್ರ ಚಿತ್ರಲೇಖಗಳು ಪ್ರತಿನಿಧಿಸುತ್ತವೆ; ಸೂಕ್ಷ್ಮವಿವರಗಳನ್ನು ಅವು ತೋರಿಸಲಾರವು.

ಬಹುಶಃ ಪೂರ್ವ ಶಿಲಾಯುಗದಿಂದಲೂ ಚಿತ್ರಲೇಖನ (ಪಿಕ್ಟೋಗ್ರಾಮ್) ಬಳಕೆಯಲ್ಲಿದೆ. ವಿಶಾಲ ಅರ್ಥದಲ್ಲಿ ಅದು, ಬರೆದಿರುವ, ಬಣ್ಣಹಚ್ಚಿರುವ, ಗೀರಿರುವ ಕೆತ್ತಿರುವ ಅಥವಾ ಕೊರೆದಿರುವ ಚಿತ್ರಗಳ ಮೂಲಕ ಮಾನವನ ಭಾವ ಪ್ರದರ್ಶನ ವಿಚಾರ ವಿನಿಮಯಗಳ ಸಮಗ್ರತೆಯನ್ನು ಸೂಚಿಸುತ್ತದೆ. ಕೇವಲ ಕಲಾತ್ಮಕ ದೃಷ್ಠಿಯಿದ್ದ ಪೂರ್ವಕಾಲದ ಪ್ರಯತ್ನಗಳನ್ನು ವಿಚಾರ ವ್ಯಕ್ತಪಡಿಸುವ ಮತ್ತು ವಿನಿಮಯದ ಉದ್ದೇಶವಿದ್ದ ಚಿತ್ರಗಳನ್ನೂ ಅದು ಒಳಗೊಂಡಿದೆ. ಇಂಥ ಚಿತ್ರಗಳನ್ನು ಬರೆಹದ ಪೂರ್ವಗಾಮಿಗಳು ಎನ್ನಬಹುದು. ಒಂದು ಸಂಕುಚಿತ ಅರ್ಥದಲ್ಲಿ ಚಿತ್ರಲೇಖಗಳ ಶಿಲೆಗಳ ಮೇಲಿನ ಪೂರ್ವಕಾಲದ ಚಿತ್ರಗಳನ್ನು ಸೂಚಿಸುತ್ತದೆ. ಚಿತ್ರಗಳನ್ನು ಎಳೆಯಲಾಗಿದ್ದರೆ ಅಥವಾ ಬಣ್ಣದಲ್ಲಿ ರಚಿಸಲಾಗಿದ್ದರೆ ಅವಕ್ಕೆ ಪೆಟ್ರೋಗ್ರಾಮ್ಸ್ ಎಂದೂ ಕರೆಯಲಾಗಿದ್ದರೆ ಇಲ್ಲವೆ ಕೆತ್ತಲ ಆಗಿದ್ದರೆ ಅವಕ್ಕೆ ಪೆಟ್ರೋಗ್ಲಿಪ್ಸ್ ಎಂದು ಹೆಸರು, ಚಿತ್ರಲೇಖಗಳ ಅತ್ಯಂತ ಹಳೆಯ ರೂಪದಲ್ಲಿ. ಸರಳ ಕಥಾನಕಗಳನ್ನು ನೇರವಾಗಿ ತಿಳಿಸಲು ಪ್ರತೀಕಗಳ ಸರಣಗಳನ್ನು ಬರೆಯಲಾಗುತ್ತಿತ್ತು.

	ಆಫ್ರಿಕ, ಏಷ್ಯ ಮತ್ತು ಉತ್ತರ ಅಮೆರಿಕದ ಕೆಲವು ಭಾಗಗಳ ಆಧುನಿಕ ಆದಿ ಜನಾಂಗದವರು ಈಗಲೂ ಈ ವಿಧಾನವನ್ನು ಬಳಸುತ್ತಿದ್ದಾರೆ. ಮೆಕ್ಸಿಕೋದ ಕೆಲವು ಕೋಮುಗಳ ಜನರು ಈ ವಿಧಾನವನ್ನು ಮೇಲ್ಮಟ್ಟದ ಕೌಶಲದಿಂದ ಬಳಸುತ್ತಿದ್ದರು. ಮೆಕ್ಸಿಕೊ ಸ್ಪೇನಿನ ವಸಾಹತು ಆಗುವ ಮೊದಲಿನ ಹಲವು ಚಿತ್ರಲೇಖಗಳು ಇಂದಿಗೂ ಉಳಿದಿವೆ. ಉತ್ತರ ಅಮೇರಿಕ ಇಂಡಿಯನ್ ಪಂಗಡಗಳಲ್ಲಿ ಬಹಳ ಕ್ರಮಬದ್ದ ಚಿತ್ರಲೇಖನ ಪ್ರಚಲಿತವಾಗಿತ್ತು. ಇತ್ತೀಚೆಗೆ ಡಕೋಟಾದ ಇಂಡಿಯನ್ ಪಂಗಡದವರು ತಮ್ಮ ಚರಿತ್ರೆಯನ್ನು ಚಿತ್ರಲೇಖಗಳಲ್ಲಿ ಸಿದ್ಧಗೊಳಿಸಿದ್ದಾರೆ.					(ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ